ಗತಕಾಲದ ಚಿತ್ರಮಂದಿರ ಶಾಂತಲಾ ಒಂದು ನೆನಪು

ಅರೇನಹಳ್ಳಿ ಧರ್ಮೇಂದ್ರ ಕುಮಾರ್

1977 , ಅಣ್ಣಾವ್ರ ಬ್ಲಾಕ್ ಬಸ್ಟರ್ ಚಿತ್ರ ಬಬ್ರುವಾಹನ ಬಿಡುಗಡೆಯಾಗಿತ್ತು… ಜನ ಹುಚ್ಛೆದ್ದು ಹೋಗಿದ್ರು… ಅಣ್ಣಾವ್ರ ದ್ವಿಪಾತ್ರಾಭಿನಯ , ಒಂದನ್ನೊಂದು ಮೀರಿಸುವಂಥ ಹಾಡುಗಳು… ಅಬ್ಬಾ … ಮೈ ರೋಮಾಂಚನ ಆಗೋದೂ ಅಂದ್ರೇನು… ಖುರ್ಚಿ ತುದೀಲಿ ಕೂತು ಪಿಚ್ಚರ್ ನೋಡೋದೂ ಅಂದ್ರೇನು ಅಂತ ಅವತ್ತೇ ನಾನು ನೋಡಿದ್ದು… ಎಂಥಾ ಪ್ರಚಂಡ ರಷ್ಷು ಅಂತೀರಿ… ಕ್ಯೂ ಶಾಂತಲಾ ಥಿಯೇಟರ್ ದಾಟಿ ಡಬಲ್ ರೋಡಿನಿಂದ ಕೆಳಗಿಳಿದು ಹೋಗಿತ್ತು… ಅಷ್ಟು ಜನ ಇದ್ರೂ ಒಂದು ಗಲಾಟೆ ಆಗಲಿ , ಬ್ಲಾಕ್ ಟಿಕೆಟ್ ಮಾರೋರಾಗಲಿ ಎಲ್ಲೆಲ್ಲೂ ಕಾಣ್ತಾ ಇರ್ಲಿಲ್ಲ…

ನನಗಾಗ ಒಂಭತ್ತು ವರ್ಷ… ಅಜ್ಜಿ ಕರ್ಕೊಂಡ್ ಹೋಗಿದ್ರು… ಅಣ್ಣಾವ್ರ ಸಿನೆಮಾ ಬಿಡುಗಡೆಯ ಸಂಭ್ರಮವನ್ನು ಬೆರಗಿನ ಕಣ್ಣುಗಳಿಂದ ನೋಡುತ್ತಿದ್ದೆ… ಕ್ಯೂ ನಿಧಾನವಾಗಿ ಸಾಗುತ್ತಿತ್ತು… ಅತ್ತಿತ್ತ ನೋಡುತ್ತಿದ್ದ ನನಗೆ… ಆಗೋ ಅಲ್ಲೀ… ಬಬ್ರುವಾಹನ ಹಾಡುಗಳ ಪುಸ್ತಕ ಮಾರುತ್ತಿದ್ದವನೊಬ್ಬ ಕಣ್ಣಿಗೆ ಬಿದ್ದ… ಐದು ಪೈಸೆ ಒಂದಕ್ಕೆ… ಅಜ್ಜಿಯನ್ನ ಕಾಡಿಸಿ ಪೀಡಿಸಿ ಅವಳ ಸೆರಗ ಅಂಚಿನ ಗಂಟಿನಿಂದ ಕಾಸು ಬಿಚ್ಚಿಸಿಕೊಂಡು ಕ್ಯೂನಿಂದ ನೆಗೆದು ಒಂದೇ ಓಟ ಓಡಿ ಪುಸ್ತಕ ಕೊಂಡೆ… ನವಿರಾಗಿ ಅದನ್ನು ಸವರಿದೆ… ಅರ್ಜುನ ಬಬ್ರುವಾಹನರ ವಿವಿಧ ಭಂಗಿಗಳು… ಹಾಡಲು ಕೇಳಲು ಇಂಪಾದ ಹಾಡುಗಳು… ನಿನ್ನ ಕಣ್ಣ ನೋಟದಲ್ಲೇ , ಆರಾಧಿಸುವೆ ಮದನಾರಿ , ಯಾರು ತಿಳಿಯರು ನಿನ್ನ… ಅಬ್ಬಾ ಆ ಥ್ರಿಲ್ಲೇ ಬೇರೆ ಲೆವೆಲ್ಲು… ಎಲ್ಲವನ್ನೂ ಆನಂದಿಸುತ್ತಾ ಮತ್ತೆ ಕ್ಯೂ ನ ಬಳಿ ಬಂದೆ… ಇನ್ನೇನು ಒಳಕ್ಕೆ ನುಗ್ಗಬೇಕು…

ಫಟ್ಟನೆ ಕುಂಡೆಯ ಮೇಲೆ ಏಟೊಂದು ಬಿತ್ತು… ಅಯ್ಯಪ್ಪ… ಸವರಿಕೊಳ್ಳುತ್ತಾ ಹಿಂದಿರುಗಿ ನೋಡಿದರೆ ದಪ್ಪ ಮೊನಚು ಮೀಸೆಯ , ಚಿರತೆಯ ಕಣ್ಣುಗಳ , ದೊಡ್ಡ ಹೊಟ್ಟೆಯ ಮ್ಯಾನೇಜರ್… ಕೈಯಲ್ಲೊಂದು ಪೊಲೀಸ್ ಕೋಲು… ಕಣ್ಣುಗಳನ್ನು ತಿರುಗಿಸುತ್ತಾ ದುರ್ಗುಟ್ಟಿ ನೋಡಿ ಹೇಳಿದ್ರು…

ಯಾಕೋ ಭಡವಾ… ಬೇಕೇನೋ ಖರ್ಚಿಗೆ … ಮಧ್ಯದಲ್ಲಿ ನುಗ್ತೀಯಾ… ಕ್ಯೂನಲ್ಲಿ ಬಾ…

ನನಗೋ ಒಂದು ಕ್ಷಣಕ್ಕೆ ಅಳೂನೇ ಬಂದಿತ್ತು… ಬಿದ್ದ ಏಟು , ತಪ್ಪಿಹೋದ ಕ್ಯೂ , ಸಿನೆಮಾ ನೋಡೋಕೆ ಅಗಲ್ವೇನೋ … ಅಷ್ಟರಲ್ಲಿ ಅಜ್ಜಿ…

ಬಿಡಯ್ಯೋ… ನನ್ ಮೊಮ್ಮಗ ಕಣ… ಏರಿತ್ತು ದನಿ..

ಮ್ಯಾನೇಜರ್ ಏನಾದ್ರೂ ಹೇಳೋಕೂ ಮೊದಲೇ ಚಂಗನೆ ಒಂದೇ ನೆಗೆತಕ್ಕೆ ಹಾರಿ ಅಜ್ಜಿಯ ಕೈ ಹಿಡಿದು ನಿಂತೇ… ದೇಹ ಸಣ್ಣಗೆ ನಡುಗುತ್ತಿತ್ತು… ಒಳಗೆ ಅಣ್ಣಾವ್ರ ವೈಭವ ನೋಡಿದ ಕೂಡಲೇ ಎಲ್ಲ ಮಾಯಾ… ಅಹ್ ಏನ್ ಸಿನೆಮಾ ರೀ ಅದು… ನಾನು ಹಿಂದೆಂದೂ ಕಾಣದ ಇಂದ್ರಲೋಕದ ಐಭೋಗ…

ಆಮೇಲಾಮೇಲೇ ನಾನು ಶಾಶ್ವತವಾಗಿ ಶಾಂತಲೆಯ ಅಭಿಮಾನಿಯಾಗಿ ಹೋದೆ… ಬಂತಲ್ಲ ಅಣ್ಣಾವ್ರ ಸಾಲು ಸಾಲು ಚಿತ್ರಗಳು… ಒಂದಕ್ಕಿಂತ ಒಂದು ಸೂಪರ್ ಹಿಟ್… ಗಿರಿಕನ್ಯೆ ಸನಾದಿ ಅಪ್ಪಣ್ಣ , ಶಂಕರ್ ಗುರು , ಆಪರೇಷನ್ ಡೈಮೆಂಡ್ ರಾಕೆಟ್ , ತಾಯಿಗೆ ತಕ್ಕ ಮಗ , ಹುಲಿಯ ಹಾಲಿನ ಮೇವು… ಕಣ್ಣು ಮುಚ್ಚಿ ಮನೆ ಬಿಟ್ಟರೂ ಕಾಲುಗಳು ಸೀದಾ ಶಾಂತಲಾ ಹತ್ರ ಹೋಗಿ ನಿಲ್ತಾ ಇದ್ವು…

ಪಿಚ್ಚರ್ ನೋಡಿದ್ರೆ ಶಾಂತಲದಲ್ಲೇ ನೋಡ್ಬೇಕು ಅನ್ನೋ ಗೌರವ ಬೆಳೆಸಿಕೊಂಡಿದ್ದ ಥಿಯೇಟರ್ ಅದು… ಕುಟುಂಬ ಸಮೇತ ಯಾವುದೇ ಕಿರಿಕಿರಿಯಿಲ್ಲದೇ ನೆಮ್ಮದಿಯಾಗಿ ಸಿನೆಮಾ ನೋಡಬಹುದಾಗಿದ್ದ ಥಿಯೇಟರ್ ಸಹ ಅದೇನೇ… ಶಾಂತಲಾ…

ಕೆರಳಿದ ಸಿಂಹ , ಹೊಸಬೆಳಕು ಬಂದ ಕಾಲಕ್ಕೆ ಒಂದೊಂದನ್ನೂ ಎಂಟು ಹತ್ತು ಸಲ ನೋಡೋ ಹುಚ್ಚು ಹತ್ತಿತ್ತು…

ಅದು 1982 , ಹೊಸಬೆಳಕು… ಹನ್ನೆರಡನೇ ಸಲ ನೋಡೋಕೆ ಸ್ಕೂಲ್ ಮುಗಿಸಿಕೊಂಡು ಶಾಂತಲಾಗೆ ಹೋಗಿ ಕ್ಯೂನಲ್ಲಿ ನಿಂತೆ… ಆಲ್ಮೋಸ್ಟ್ ಪ್ರತೀದಿನ ನನ್ನನ್ನು ನೋಡುತ್ತಿದ್ದ ಮ್ಯಾನೇಜರ್ ಮೆಲ್ಲನೆ ನಕ್ಕರು… ನನಗೆ ಒಂದು ದೊಡ್ಡ ಯುದ್ಧವನ್ನೇ ಗೆದ್ದಂಥ ಭಾವ… ನಾನೂ ನಕ್ಕೆ… ನಮಸ್ಕಾರ ಸಾರ್…

ಅಂದಿನಿಂದ ಶಾಂತಲದಲ್ಲಿ ರಿಲೀಸ್ ಆಗೋ ಸಿನೆಮಾಗಳಿಗೆ ಹೋದಾಗಲೆಲ್ಲ ಅವರನ್ನು ಹುಡುಕಿ ಕಂಡು ನಮಸ್ಕಾರ ಸಾರ್ ಹೇಳಿಯೇ ಒಳ ಹೋಗುತ್ತಿದ್ದೆ…

ಮೈಸೂರಿಗರೆಲ್ಲರ ಬಾಲ್ಯದ , ಯೌವನದ ದಿನಗಳ ಕನಸುಗಳನ್ನು ತುಂಬಿಕೊಳ್ಳುವ ಕಣಜವೇ ಆಗಿಹೋಗಿತ್ತು ಶಾಂತಲಾ… ಪಿಚ್ಚರ್ ಯಾವುದೇ ಇದ್ರೂ , ಹ್ಯಾಗೆ ಇದ್ರೂ ಶಾಂತಲಾದಲ್ಲಿ ನೋಡಿದರೇನೇ ಏನೋ ಒಂದು ಸಮಾಧಾನ…

ಅಷ್ಟೆಲ್ಲ ದಿವಿನಾಗಿ ನಮ್ಮ ಕನಸುಗಳಿಗೆ ಜೀವ ತುಂಬಿದ್ದ ಶಾಂತಲೆ ನಿರ್ವಾಹವಿಲ್ಲದೆ ಕಣ್ಣು ಮುಚ್ಚಿ ಕಾಲನ ಕರೆಗೆ ಓಗೊಟ್ಟು ನಮ್ಮನೆಲ್ಲ ಬಿಟ್ಟು ಹೊರಟೇ ಬಿಟ್ಟಿದ್ದಾಳೆ…

ನವಿರು ಭಾವಗಳನ್ನು ಚಿಮ್ಮಿಸಿ ಹೊಮ್ಮಿಸುತ್ತಿದ್ದ ಶಾಂತಲೆಯನ್ನೂ… ದೊಡ್ಡ ಮೀಸೆಯ ಮ್ಯಾನೇಜರ್ ರನ್ನೂ… ಕಳೆದುಕೊಂಡ ಭಾವ ಬಹಳ ಕಾಲ ನಮ್ಮನೆಲ್ಲ ಕಾಡದೇ ಬಿಡದು…

ಮಿಸ್ ಯೂ ಶಾಂತಲಾ…

(Visited 106 times, 1 visits today)

You Might Be Interested In